ಸಂಜಯ
	ಮಹಾಭಾರತದ ಒಂದು ಪಾತ್ರ. ಧೃತರಾಷ್ಟ್ರನ ಮಂತ್ರಿ ಹಾಗೂ ಸಾರಥಿ. ಗವಲ್ಗಣನ ಮಗ. ವ್ಯಾಸಮುನಿಯ ಅನುಗ್ರಹದಿಂದ ದಿವ್ಯದೃಷ್ಟಿ ಪಡೆದು ಅನುಗಾ ಲವೂ ಅಂಧನಾಗಿದ್ದ. ಧೃತರಾಷ್ಟ್ರನೊಂದಿಗೆ ಇರುತ್ತಿದ್ದ. ಪಾಂಡವರು ದ್ಯೂತದಲ್ಲಿ ಸೋತಾಗ ಧೃತರಾಷ್ಟ್ರನಿಗೆ ಹಿತೋಪ ದೇಶ ಮಾಡಿದ. ಪಾಂಡವರು ಉಪಪ್ಲಾವ್ಯ ನಗರದಲ್ಲಿದ್ದಾಗ ಧೃತರಾಷ್ಟ್ರ ಈತನನ್ನು ಸಂಧಿಕಾರ್ಯಕ್ಕೆ ಕಳುಹಿಸಿದ್ದ. ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನೆಲ್ಲ ತನ್ನ ದಿವ್ಯದೃಷ್ಟಿಯಿಂದ ತಿಳಿದು ಯಥಾವತ್ತಾಗಿ ಧೃತರಾಷ್ಟ್ರನಿಗೆ ತಿಳಿಸುತ್ತಿದ್ದ. ಮಹಾಭಾರತ ಯುದ್ಧದ ಹದಿನೆಂಟನೆಯ ದಿನ ಕೌರವರ ಕಡೆ ನಿಂತು ಯುದ್ಧ ಮಾಡಿದ. ವ್ಯಾಸಮುನಿ ಮಧ್ಯ ಪ್ರವೇಶಿಸಿದುದರಿಂದ ಸಾತ್ಯಕಿ ಸಂಜಯನನ್ನು ಕೊಲ್ಲದೆ ಉಳಿಸಿದ. 

	ಮಹಾಭಾರತ ಯುದ್ಧಮುಗಿದೊಡನೆ ವ್ಯಾಸಮುನಿ ಕರುಣಿಸಿದ ದಿವ್ಯದೃಷ್ಟಿ ಸಂಜಯನಿಂದ ಮಾಯವಾದಾಗ ಧೃತರಾಷ್ಟ್ರನೊಂದಿಗೆ ಅರಣ್ಯಕ್ಕೆ ತೆರಳಿ ಅವನ ಸಂಗಡವೇ ಇದ್ದ. ಧೃತರಾಷ್ಟ್ರ, ಗಾಂಧಾರಿ, ಕುಂತಿಯರ ಜೊತೆ ಕಾಳ್ಗಿಚ್ಚು ಹೊಕ್ಕು, ಅವರು ದೇಹತ್ಯಾಗ ಮಾಡಿದ ಮೇಲೆ ಈತ ಹಿಮವತ್ಪರ್ವತದ ಕಡೆಗೆ ತೆರಳಿದ. ಈ ವೃತ್ತಾಂತ ಮಹಾಭಾರತದಲ್ಲಿ ನಿರೂಪಿತವಾಗಿದೆ.
												(ಆರ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ